*ವಿಚಿತ್ರವೆನಿಸಿದರೂ ಸತ್ಯವೆನಿಸಿದ ಹಲವು ವಿಷಯಗಳ ಬಗ್ಗೆ ನಾವ್ಯಾರೂ ಅಷ್ಟಾಗಿ ಚಿಂತಿಸುವುದೇ ಇಲ್ಲ.*
*ಯಾಕೆಂದರೆ ನಮ್ಮ ಚಿಂತನೆಗಳನ್ನೇ ಹತ್ತಿಕ್ಕುವ ಕೆಲಸ ಕೆಲವರಿಂದ ನಡೆದಿರುತ್ತದೆ.*
*ಯಾವುದಾದರೂ ಒಂದು ಗುಂಪಿನ ನಡೆಗಳ ಬಗ್ಗೆ ಸಾರ್ವಜನಿಕವಾಗಿ ಆಕ್ಷೇಪಗಳಿದ್ದರೆ ಆ ಗುಂಪಿನೊಂದಿಗೆ ಅನಿವಾರ್ಯ ಸಂದರ್ಭಗಳಲ್ಲಿ ಮತ್ತು ಮಾನವೀಯತೆಯ ದೃಷ್ಟಿಯಿಂದ ಸಂಬಂಧ ಸ್ಥಾಪಿಸಿದರೆ ಕೋಮುವಾದಿ ಮನೋಭಾವವನ್ನು ಮೈಯಿಡೀ ಮೆತ್ತಿಕೊಂಡಿರುವ ವಿವಿಧ ಸಮುದಾಯಗಳಲ್ಲಿರುವ ಕೆಲವು ಧರ್ಮರಕ್ಷಣೆಯ ನಕಲಿ ಮುಖವಾಡ ಹೊತ್ತವರಿಗೆ ಎಲ್ಲಿಲ್ಲದ ಅಲರ್ಜಿ.*
*ಯಾಕೆಂದರೆ ಇನ್ನೊಂದು ಸಮುದಾಯದ ಬಗ್ಗೆ ಸದಾ ದ್ವೇಷ ಕಾರುತ್ತಲೇ ತಮ್ಮೆಲ್ಲಾ ಆಂದೋಲನಗಳನ್ನು ನಡೆಸಿ ಸುಭಗರೆನಿಸಿಕೊಳ್ಳುವವರಿಗೆ ಮಾನವ ಸಮುದಾಯ ಶಾಶ್ವತವಾಗಿ ಏಕತೆಯಿಂದಿರುವುದು ಯಾವತ್ತೂ ಪಥ್ಯವೆನಿಸುವುದೇ ಇಲ್ಲ.*
*ಸಮಾಜ ಎಂದ ಮೇಲೆ ಅಲ್ಲಿ ಎಲ್ಲಾ ಜಾತಿ, ಮತ, ವರ್ಗಗಳು ಇರಲೇಬೇಕು.*
*ಈ ಪೈಕಿ ನಾನಾ ಪಕ್ಷ, ಸಂಘಟನೆ, ಪಂಥಗಳಿರುತ್ತವೆ.*
*ಒಬ್ಬರ ಆಶಯ, ಪಕ್ಷ, ಸಂಘಟನೆಯ ಸಿದ್ದಾಂತವನ್ನು ನಾವು ಒಪ್ಪಿಕೊಳ್ಳಬೇಕೆಂದೇನೂ ಇಲ್ಲ.*
*ಅಂದ ಮಾತ್ರಕ್ಕೆ ಅವರ ಶಾಶ್ವತ ವಿರೋಧಿಗಳಾಗುವುದು ಮಾನವರೆನಿಸಿಕೊಂಡವರಿಗೆ ಭೂಷಣವೂ ಅಲ್ಲ.*
*ಸಾಂದರ್ಭಿಕವಾಗಿ ಅಂಥವರೊಂದಿಗೆ ಸಂಪರ್ಕ ಸಾಧಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾದಾಗ ಅವರೊಂದಿಗೆ ಸಂಪರ್ಕ ಸಾಧಿಸುವುದು ಧಾರ್ಮಿಕ ದೃಷ್ಟಿಕೋನದಲ್ಲಿ ಧರ್ಮ ವಿರೋಧಿ ಚಟುವಟಿಕೆ ಎನಿಸುವುದಿಲ್ಲ.*
*ಮಾನವೀಯತೆಯ ನರಸತ್ತು ಸದಾ ಕೋಮುವಾದವನ್ನೇ ಉಸಿರಾಡುವ ಸಮಾಜ ದ್ರೋಹಿಗಳಿಗೆ ಇಂಥಹ ಸಂದರ್ಭಗಳಲ್ಲಿ ಸಮಾಜದ ಗೌರವಾನ್ವಿತ ವ್ಯಕ್ತಿಗಳೂ ಕೇವಲವೆನಿಸುತ್ತಾರೆ.*
*ಯಾವುದೇ ಒಂದು ಸಮುದಾಯದ ದುರಂತವೂ ಇದೇ ಆಗಿದೆ.*
*ಗೌರವ ಕೊಡಬೇಕಾದವರಿಗೆ ಗೌರವ ಕೊಡದೆ ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟುಕೊಂಡು ಅವರನ್ನು ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಮನಸೋಇಚ್ಚೆ ನಿಂದಿಸಿ ಆತ್ಮಸಂತೃಪ್ತಿ ಪಡೆಯುವವರು ಎಲ್ಲೆಡೆಗಳಲ್ಲೂ ತುಂಬಿಕೊಂಡಿದ್ದಾರೆ.*
*ಒಳಿತು ಅಂದರೆ ಏನೆಂದೇ ತಿಳಿಯದೆ, ನೊಣಗಳಂತೆ ಇತರರ ಕುಂದುಕೊರತೆಗಳನ್ನು ಮಾತ್ರ ಹೆಕ್ಕಿ ತೆಗೆದು ಪರ್ವತೀಕರಣ ಮಾಡಿ ತೋರಿಸಿ, ನಾವು ಭಾರೀ ಸಾಧನೆಯನ್ನು ಮಾಡಿದ್ದೇವೆಂದು ಬಿಂಬಿಸುವ ಮಂದಿ ಧರ್ಮದ ಬಾಲಪಾಠಗಳನ್ನು ಕೂಡ ಕಲಿಯದ ಅವಿವೇಕಿಗಳೆಂಬುದು ತರ್ಕವಿಲ್ಲದ ಮಾತು.*
*ಒಂದು ದೇಶ ಅಥವಾ ರಾಜ್ಯಗಳಲ್ಲಿ ವಿವಿಧ ಪಕ್ಷಗಳ ಆಡಳಿತವಿರುತ್ತದೆ.*
*ನಾಗರಿಕರ ಪಾಲಿಗೆ ಯಾವುದೇ ಪಕ್ಷದ ಸರಕಾರವಾದರೂ ಅದು ನಮ್ಮದೇ ಸರಕಾರ ಎಂಬ ವಿಶಾಲ ಮನೋಭಾವವಿರುತ್ತದೆ.*
*ಅವರು ಬೇರೆ ಪಕ್ಷದವರು ಅವರೊಂದಿಗೆ ಯಾವ ಸಂಬಂಧವೂ ಬೇಡ ಎಂಬ ಸಂಕುಚಿತ ಮನೋಭಾವ ಸಾರ್ವಜನಿಕರಿಗೆ ಇರುವುದಿಲ್ಲ.*
*ಸರಕಾರಗಳಿಂದ ಸಿಗುವ ವಿವಿಧ ಸವಲತ್ತುಗಳನ್ನು ಪಡೆಯಲು ಯಾವತ್ತೂ ಅಂಥಾ ಉದಾತ್ತ ಮನೋಭಾವವುಳ್ಳವರಿಗೆ ಯಾವುದೇ ಹಿಂಜರಿಕೆಯಿರುವುದಿಲ್ಲ.*
*ಎಂ ಆರ್ ಎಂ ಎಂಬ ಗುಮ್ಮನನ್ನು ತೋರಿಸಿ ಇಡೀ ಸುನ್ನೀ ಸಮುದಾಯವನ್ನು ನಿಂದಿಸುವ ಧರ್ಮದ್ರೋಹಿಗಳು ತಾವು ನೂತನವಾದಿ ಆಶಯವನ್ನು ಸಾಲ ಪಡೆದವರು ಎಂಬುದನ್ನು ಯಾವತ್ತೂ ಮರೆಯಬಾರದು.*
✋ *ಭಾರತೀಯ ನಾಗರಿಕ*
No comments:
Post a Comment